ಶಕೀಲ್ ಬಿನ್ ಹನೀಫ್ ಫಿತ್ನ, ಏನಿದು ಕಾದಿಯಾನಿಗಳ ಹೊಸ ರೂಪವೇ ?

Share Post

ಶಕೀಲ್ ಬಿನ್ ಹನೀಫ್, ಬಿಹಾರ ರಾಜ್ಯದ, ದರ್ಭಂಗ ಜಿಲ್ಲೆಯ ಉಸ್ಮಾನ್ ಪುರದ ನಿವಾಸಿಯಾಗಿದ್ದಾನೆ. ಇವನು ಕೆಲವು ವರ್ಷಗಳ ಹಿಂದೆ ದೆಹಲಿಯಲ್ಲಿ ವಾಸಿಸುತ್ತಿದ್ದ. ಮೊದ ಮೊದಲು ಇವನು ತನ್ನನ್ನು ಮೆಹ್ದಿ ಎಂದು ಹೇಳುತ್ತಿದ್ದ. ಮುಂದುವರಿದು ತನ್ನನ್ನು ಮಸೀಹ್ (.) ಎಂದು ಹೇಳತೊಡಗಿದ ಪ್ರಕಾರ ಕಾದಿಯಾನಿಗಳ ಒಂದು ಹೊಸ ರೂಪ ಜನ್ಮ ತಾಳಿತು. ದೆಹಲಿಯ ನಾನಾ ಪ್ರದೇಶಗಳಲ್ಲಿ ಇವನು ತನ್ನನ್ನು ಮೆಹ್ದಿ ಹಾಗೂ ಮಸೀಹ್ (.) ಎಂದು ಪ್ರಚಾರ ಮಾಡತೊಡಗಿದ. ಪ್ರತೀ ಬಾರಿಯೂ ಎಚ್ಚರಿಕೆಯ ಸಂದೇಶ ಸಿಕ್ಕಿದಾಕ್ಷಣ ಕೆಲವೇ ಕೆಲವು ದಿನಗಳ ನಂತರ ಇವನು ತನ್ನ ವಾಸಸ್ಥಾನವನ್ನು ಬದಲಿಸುತ್ತಿದ್ದ. ನಬಿಯೆ ಕರೀಮ್ ಹೆಸರಿನ ಮೊಹಲ್ಲಾದಲ್ಲಿ ತನ್ನ ಪ್ರಚಾರ ಕಾರ್ಯವನ್ನು ಆರಂಭಿಸಿದ. ಈ ಮೊಹಲ್ಲಾವನ್ನೇ ಅವನು ತನ್ನ ಮುಖ್ಯ ಕಛೇರಿಯನ್ನಾಗಿ ಮಾಡಿದ. ತದ ನಂತರ ಲಕ್ಷೀ ನಗರದ ಎರಡು ಬೇರೆ ಬೇರೆ ಪ್ರದೇಶಗಳಲ್ಲಿ ತನ್ನ ಸಂಚನ್ನು ಮುಂದುವರಿಸಿದ. ದೆಹಲಿಯ ವಾಸ್ತವದ ಸಮಯದಲ್ಲಿ, ವಿಶೇಷವಾಗಿ ನಾನಾ ಶಾಲಾ, ಕಾಲೇಜುಗಳಲ್ಲಿ ವ್ಯಾಸಂಗವನ್ನು ಮಾಡುವ ವಿದ್ಯಾರ್ಥಿಗಳನ್ನು ಇವನು ತನ್ನ ಗುರಿಯಾಗಿಸಿದ್ದನು. ಇವರು ವಿದ್ಯಾಭ್ಯಾಸಕ್ಕಾಗಿ ದೂರ ದೂರದ ಊರುಗಳಿಂದ ಇಲ್ಲಿಗೆ ಬರುತ್ತಿದ್ದರು.

ಜನರಿಗೆ ಇವನ ಕುತಂತ್ರಗಳ ಬಗ್ಗೆ ಮಾಹಿತಿ ಸಿಕ್ಕುವುದೇ ತಡ, ಇವನು ಅಲ್ಲಿಂದ ಕಾಲ್ಕಿತ್ತುತ್ತಿದ್ದ. ಅಲ್ಲಲ್ಲಿ ಇವನ ಮೇಲೆ ನಾನಾ ಪ್ರಕರಣಗಳು ದಾಖಲಾದವು. ಕೊನೆಗೆ ಇಲ್ಲಿ ಅವನ ತಂತ್ರಗಳು ಫಲಿಸುವುದಿಲ್ಲ ಎಂದು ತಿಳಿದಾಕ್ಷಣ ಅವನಿಗೆ ಅಲ್ಲಿಂದ ಜಾಗವನ್ನು ಖಾಲಿ ಮಾಡಲೇ ಬೇಕಾಯಿತು. ಕೊನೆಗೂ ಮಹಾರಾಷ್ಟ್ರದ ಔರಂಗಾಬಾದ್ ಎಂಬಲ್ಲಿ ಹೋಗಿ ವಾಸಿಸತೊಡಗಿದ. ಅಲ್ಲಿ ಯಾರೋ ಒಬ್ಬರು ಬಹುದೊಡ್ಡ ಪ್ರದೇಶವನ್ನೇ ಖರೀದಿಸಿ ಒಂದು ಹೊಸ ಬಡಾವಣೆಯನ್ನು ಮಾಡಲು ಅವಕಾಶವನ್ನು ಮಾಡಿ ಕೊಟ್ಟರು. ಅದರಲ್ಲಿ ಅವನು ಹಾಗೂ ಅವನ ಚೇಲಾಗಳು ಇರಲು ಪ್ರಾರಂಭಿಸಿದರು.

ದೇಶದ ನಾನಾ ಭಾಗಗಳಲ್ಲಿ ಮೆಹ್ದಿ, ಹಾಗೂ ಮಸೀಹ್ (.) ಇವೆರಡರ ಪ್ರಚಾರ ಮಾಡುವ ಕಾರ್ಯಕ್ರಮ ಕೆಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ದೆಹಲಿ, ಬಿಹಾರ, ಮಹಾರಾಷ್ಟ್ರ ಹಾಗೂ ಆಂಧ್ರ ಪ್ರದೇಶಗಳಲ್ಲಿ ಸಂಚಿಗೆ ಬಹು ದೊಡ್ಡ ಸಮೂಹವೇ ಬಲಿಯಾಗಿದೆ. ನಿಟ್ಟಿನಲ್ಲಿ ಸಮುದಾಯದ ಕಾಳಜಿಯನ್ನು ವಹಿಸಿರುವ ಹಲವು ಉಲಮಾ, ಉಮರಾರವರು ಇವನ ಸಂಚನ್ನು ಬಯಲು ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದಾರೆ.

ಉತ್ತರ ಪ್ರದೇಶ ಕುತಂತ್ರಕ್ಕೆ ಬಲಿಯಾಗಲಿಕ್ಕಿಲ್ಲ, ಇಲ್ಲಿ ಅವನ ಕಾಲುಗಳು ನೆಲೆಯೂರಲಿಕ್ಕೆ ಸಾಧ್ಯವಿಲ್ಲ ಎಂದು ಹಲವು ಚಿಂತಕರು ಭಾವಿಸುತ್ತಿದ್ದರು. ಇದೀಗ ನೋಡಲು ಹೋದರೆ ಲಕ್ನೋದಂತಹ ಪ್ರದೇಶಗಳು ನಮ್ಮ ಅಜ್ಞಾನಕ್ಕೆ ಪುರಾವೆಯಾಗಿತ್ತು. ಕಳೆದ ಎರಡು ವರ್ಷಗಳಿಂದ ಸ್ಟಾರ್ ಪ್ರಚಾರಕರಾಗಿ ಇಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕಂಡು ಬಂತು. ಅತ್ಯಂತ ವೇಗವಾಗಿ ಫಿತ್ನ ಅಲ್ಲಲ್ಲಿ ವೇಗವನ್ನು ಪಡೆಯುತ್ತಿದೆ. ಅತ್ಯಂತ ಬೇಜಾರಿನ ವಿಷಯವೆಂದರೆ, ನಮ್ಮ ಕೆಲ ಉನ್ನತ ವ್ಯಾಸಂಗವನ್ನು ಮಾಡಿದ ಯುವಕರು ಇದಕ್ಕೆ ಬಲಿಯಾಗಿದ್ದಾರೆ. ಪೂರ್ವ ಉತ್ತರ ಪ್ರದೇಶದ ಕೆಲ ಜಿಲ್ಲೆಗಳ ಹಾಗೂ ಲಕ್ನೋದ ಕೆಲ ಯುವಕರೂ ಸಂಚಿಗೆ ಬಲಿಯಾಗಿದ್ದಾರೆ. ತನ್ನನ್ನು ಮೆಹ್ದಿ ಹಾಗೂ ಮಸೀಹ್(.) ಎಂದು ಹೇಳಿಕೊಳ್ಳುವ ಮಹಾಸುಳ್ಳುಗಾರನ ಕೈಯಲ್ಲಿ ಬೈತ್( ಪ್ರತಿಜ್ಞಾ ಮಾಡುವುದು) ಮಾಡಲು ತಯಾರಾಗಿರುವುದು ತುಂಬಾ ಆತಂಕಕ್ಕೀಡುಮಾಡಿದೆ. ಇದರರ್ಥ ಇವರ ಟೀಮ್ ತಮ್ಮ ಅಭಿಯಾನವನ್ನು ರಹದಾರಿಯ ಮೂಲಕ ಯಶಸ್ವಿಯತ್ತ ಸಾಗುಲು ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದೆ. ನಮ್ಮದೇ ಪ್ರದೇಶಗಳಲ್ಲಿ ನಮ್ಮ ಪರಿಚಯಸ್ಥ ವಿದ್ಯಾವಂತ ಯುವಕರು ಬಲಿಯಾಗುವ ಹಾಗೆ ಪ್ರಯತ್ನವನ್ನು ಮಾಡುತ್ತಿದ್ದಾರೆ. ಆದರೆ ನಮಗೆ ಇದರ ಅರಿವೇ ಇಲ್ಲ. ನಿಜವಾಗಿಯೂ ನಮ್ಮ ಅಜ್ಞಾನವು, ನಮ್ಮನ್ನು ತುಂಬಾ ಚಿಂತೆಗೀಡು ಮಾಡಿದೆ

ಫಿತ್ನದ ಪ್ರಚಾರ ಹಾಗೂ ಇದರ ಪ್ರಚಾರಕರ ಕಾರ್ಯವಿಧಾನಗಳು :

               ಮೊದಲನೆಯದಾಗಿ ತಂಡದ ಪ್ರಚಾರಕರು ವಿದ್ಯಾವಂತ ಯುವಕರೊಂದಿಗೆ ರಹಸ್ಯವಾಗಿ ಸಂಪರ್ಕವನ್ನು ಬೆಳೆಸುತ್ತಾರೆ. ವಿಧ್ಯಾರ್ಥಿಯು ಕಾಲೇಜು ಅಥವಾ ವಿಶ್ವವಿದ್ಯಾಲಯಗಳಲ್ಲಿ ಕಲಿಯುವವನಾಗಿರಬೇಕು. ಅವನು ಯಾವುದೇ ಇಸ್ಲಾಮೀ ಜಮಾತ್ಗಳಲ್ಲಿ ಅಥವಾ ಧಾರ್ಮಿಕ ಸಂಘಸಂಸ್ಥೆಗಳಲ್ಲಿ ಸಂಭಂದವನ್ನು ಹೊಂದಿದವನಾಗಿರಬಾರದು. ಇಂತಹ ಯುವಕರೊಂದಿಗೆ ಇಸ್ಲಾಮಿನ ವಿಷಯಗಳಲ್ಲಿ ಹಾಗೂ ಕೆಲವೊಂದು ಪ್ರಚಲಿತ ವಿದ್ಯಮಾನಗಳ ಬಗ್ಗೆ ಚರ್ಚಿಸುತ್ತಾರೆ. ವಾಸ್ತವದಲ್ಲಿ ಫಿತ್ನದ ಪ್ರಚಾರಕರನ್ನು ನೋಡುವಾಗ, ಇವರ ವೇಷ ಭೂಷಣಗಳನ್ನು, ಅವರ ಕಾಳಜಿಗಳನ್ನು ಕೇಳುವಾಗ ಇವರೊಬ್ಬ ಸಾಮಾನ್ಯ ವ್ಯಕ್ತಿ ಅಲ್ಲ. ಪ್ರವಾದಿ (.) ರವರ ಸುನ್ನತ್ (ಚರ್ಯೆ) ಅನುಸರಿಸುವರೂ, ಅಲ್ಲಾಹನನ್ನು ಭಯಪಡುವವರಾಗಿದ್ದಾರೆ ಎಂದು ಮೇಲ್ನೋಟಕ್ಕೆ ಕಾಣುತ್ತದೆ. ಉದಾಹರಣೆಗೆ ನೀಳ ಗಡ್ಡ, ಜುಬ್ಬಾ, ಕುರ್ತಾ, ಮಣಿಗಂಟಿಗಿಂತ ಮೇಲಿರುವ ಶಲ್ವಾರ್ಗಳನ್ನು ಧರಿಸುತ್ತಾರೆ. ಮಾತುಗಳ ನಡುನಡುವೆ ಮಾಶಾಅಲ್ಲಾಹ್, ಸುಬ್ಹಾನಲ್ಲಾಹ್,ಅಲ್ ಹಮ್ದುಲಿಲ್ಲಾಹ್, ಇನ್ಶಾ ಅಲ್ಲಾಹ್ ಮುಂತಾದ ಪದಗಳನ್ನು ಹೇಳುತ್ತಲೇ ಇರುತ್ತಾರೆ. ಇಂತಹ ಮನಮುಟ್ಟುವಂತಹ ಮಾತುಗಳನ್ನು ಕೇಳುವಾಗ ಇಸ್ಲಾಮಿನ ಬಗ್ಗೆ ಏನೂ ಅರಿಯದ ಸಾಮಾನ್ಯ ವಿದ್ಯಾರ್ಥಿಗಳು ಇದರಿಂದ ಪ್ರಭಾವಿತಗೊಳ್ಳುವುದು ಸಹಜ. ಹಾಗೂ ಇಂತಹ ಜನರನ್ನು ದೊಡ್ಡ ಧರ್ಮ ಶೃಧ್ದೆಯುಳ್ಳವರು ಎಂದೂ ಭಾವಿಸುತ್ತಾರೆ ಸಂಚಿನ ಪ್ರಚಾರದ ತಂಡದವರು ತಮ್ಮ ಬಗ್ಗೆ ಇಂತಹ ಅಭಿಪ್ರಾಯ ಉಂಟು ಮಾಡುವಲ್ಲಿ ವಿಶೇಷ ಪ್ರಯತ್ನವನ್ನು ಮಾಡುತ್ತಾರೆ. ಇದಾಗುವುದೇ ತಡ, ಕಿಯಾಮತ್(ಅಂತ್ಯದಿನ) ಬಗ್ಗೆ, ಅದರ ಕೆಲವೊಂದು ಸಂಕೇತಗಳ ಬಗ್ಗೆ ಚರ್ಚಿಸಲು ಆರಂಭಿಸುತ್ತಾರೆ. ಇಂದು ವಿಶ್ವದಲ್ಲಿ ಕಾಣಸಿಗುವ ಕೆಲವೊಂದು ಹೊಚ್ಚ ಹೊಸ ಆವಿಷ್ಕಾರಗಳು, ಹೊಸ ಶೋಧನೆಗಳು ಹಾಗೂ ಕೆಲವೊಂದು ಘಟನೆಗಳೇ ಇದರ ಸಂಕೇತ ಎಂದು ಮನವರಿಕೆ ಮಾಡಿಸಲು ಪ್ರಯತ್ನಿಸುತ್ತಾರೆ. ವಿಷಯಗಳನ್ನು ಪ್ರಸ್ತಾಪಿಸುತ್ತಾ, ಪ್ರಸ್ತಾಪಿಸುತ್ತಾ, ಮೊದಲಾದ ಹಲವು ವಿಷಯಗಳ ಬಗ್ಗೆ ಉಲಮಾಗಳಲ್ಲಿ ಚರ್ಚಿಸುವ ಅಗತ್ಯವೇ ಇಲ್ಲ ಎಂಬಂತಹ ಒಂದು ಮನಸ್ಥಿತಿಯನ್ನು ಉಂಟುಮಾಡಲೂ ಪ್ರಯತ್ನಿಸುತ್ತಾರೆ. ಉದಾಹರಣೆಗೆ ಅವರು ಹೇಳುತ್ತಾರೆ, ವಿಷಯಗಳ ಬಗ್ಗೆ ಉಲಮಾಗಳಿಗೆ ಮಾಹಿತಿಯೇ ಇಲ್ಲ. ವಿದ್ಯಾರ್ಥಿಗಳಿರುವಾಗಿ ಇವರಿಗೆ ಇಂತಹ ಹದೀಸ್ಗಳನ್ನು ಕಲಿಸುವುದೇ ಇಲ್ಲ. ಹದಿಸ್ಗಳ ಕೆಲವೊಂದು ಆಯ್ದ ಭಾಗಗಳನ್ನೇ ಓದಿಸಲಾಗುತ್ತದೆ. ಇದರ ಸಂಭಂದ ನಮಾಝ್, ಉಪವಾಸ ಮುಂತಾದ ಕೆಲವೊಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಇರುತ್ತದೆ. ಇದರಿಂದಾಗಿ ಯಾವುದಾದರೂ ಮಸೀದಿಯ ಇಮಾಮರಾಗಲಿಕ್ಕೆ ಅಥವಾ ಮದ್ರಸದಲ್ಲಿ ಉಸ್ತಾದರಾಗಲಿಕ್ಕೆ ಇವರಿಗೆ ಸುಲಭವಾಗುತ್ತದೆ ಎಂದು ಹೇಳುತ್ತಾರೆ. ಇವರ ಮನಸೆಳೆಯುವಂತಹ ಮಾತುಗಳನ್ನು ಕೇಳುವಾಗ, ವ್ಯಕ್ತಿಗಳು ಬರೇ ಇಸ್ಲಾಮಿನ ಬಗ್ಗೆ ತಿಳುವಳಿಕೆಯುಳ್ಳವರು ಮಾತ್ರವಲ್ಲ ಬದಲಾಗಿ ಇವರು ಇಸ್ಲಾಮ್ ಧರ್ಮದ ಬಹುದೊಡ್ಡ ಮೇಧಾವಿಗಳು ಎಂಬ ಭ್ರಮೆಯು ಪ್ರೇಕ್ಷಕರಲ್ಲಿ ಬೆಳೆಯುತ್ತದೆ. ಉಲಮಾಗಳಿಂದಲೂ ಮಿಗಿಲಾಗಿ ಇಸ್ಲಾಮಿನ ಜ್ಞಾನವುಳ್ಳವರು ಎಂಬ ತೀರ್ಮಾನಕ್ಕೆ ಬಂದು ಬಿಡುತ್ತಾರೆ. ಪ್ರಸಕ್ತ ಪರಿಸ್ಥಿತಿಯು ವ್ಯಕ್ತಿಯು ಏನೆಲ್ಲಾ ಹೇಳುತ್ತಾನೋ ಅದೆಲ್ಲಾ ಸರಿ ಎನ್ನುವ ಮಟ್ಟಕ್ಕೆ ಅವನನ್ನು ತಲುಪಿಸುತ್ತದೆ.

               ಇಷ್ಟೆಲ್ಲಾ ಪರಸ್ಪರ ಮಾತುಗಳ ವಿನಿಮಯದ ನಂತರ ಸಭಿಕರನ್ನು ಉದ್ದೇಶಿಸಿ ಹೇಳುತ್ತಾರೆ, ದಜ್ಜಾಲ್ ಆಗಮನ ಆಗಿದೆ. ನಿಜವಾಗಿಯೂ ದಜ್ಜಾಲ್ ಅಂದರೆ ಅಮೇರಿಕ ಹಾಗೂ ಫ್ರಾನ್ಸ್ ರಾಷ್ಟ್ರಗಳಾಗಿವೆ. ಪ್ರವಾದಿ (ಸ್ವ.) ರವರು ಒಂದು ಹದೀಸ್ನಲ್ಲಿ ಹೇಳುತ್ತಾರೆ, ದಜ್ಜಾಲ್ ಹಣೆಯಲ್ಲಿಕಾಫಿರ್ಎಂದು ಬರೆಯಲಾಗಿದೆ. ಹದೀಸ್ನಲ್ಲಿ ಎರಡು ರಾಷ್ಟ್ರಗಳ ಕಡೆ ಸಂಕೇತವನ್ನು ನೀಡಲಾಗಿದೆ. ಯಾಕೆಂದರೆ ಅಮೇರಿಕ ಹಾಗೂ ಫ್ರಾನ್ಸ್ (امریکا فرانس) ಇವೆರಡನ್ನು ಒಟ್ಟಿಗೆ ಬರೆಯುವಾಗ ಇದರ ಮಧ್ಯೆ ಕಾಫಿರ್ ಎಂದು ಬರೆದಿರುವುದನ್ನು ತಾವು ಕಾಣಬಹುದು. ಪ್ರವಾದಿ (ಸ್ವ.) ರವರು ದಜ್ಜಾಲನ್ನು ಉಲ್ಲೇಖಿಸುತ್ತಾ ಹೇಳುತ್ತಾರೆ, ದಜ್ಜಾಲ್‍ ಒಕ್ಕಣ್ಣನಾಗಿದ್ದಾನೆ. ನಿಜವಾಗಿಯೂ ಇದು ಆಕಾಶದಲ್ಲಿರುವ ಸೆಟ್‍ಲೈಟ್‍ನ ಕಡೆ ಸಂಕೇತವಾಗಿದೆ. ಕೆಲವೊಂದು ಹದೀಸ್‍ಗಳಲ್ಲಿ, ದಜ್ಜಾಲ್ ಒಬ್ಬಕತ್ತೆಯಾಗಿರುವನು ಎಂದು ಉಲ್ಲೇಖಿಸಲಾಗಿದೆ. ಇದುವೂ ಫೈಟರ್ ಪ್ಲೇನ್‍ನ ಕಡೆ ಸಂಕೇತವಾಗಿದೆ. ಇವೇ ಕೆಲವು ಮುಂತಾದ ಲಂಗುಲಗಾಮಿಲ್ಲದ ಉದಾಹರಣೆಗಳನ್ನು ಅವನು ನೀಡುತ್ತಾ ಹೋಗುತ್ತಾನೆ.

               ಮುಂದುವರಿದು ಶಕೀಲ್ ಬಿನ್ ಹನೀಫ್‍ನ ಪ್ರಚಾರಕರು ಹೇಳುತ್ತಾರೆ, ದಜ್ಜಾಲ್‍ನ ಆಗಮನದ ನಂತರ ಇಮಾಮ್ ಮೆಹ್ದಿ ಹಾಗೂ ಮಸೀಹ್(.) ರವರ ಆಗಮನವಾಗಬೇಕಿತ್ತು. ನಿಜವಾಗಿಯೂ ಅವರ ಆಗಮನವಾಗಿದೆ. ಆದ್ದರಿಂದ ದಜ್ಜಾಲ್‍ನ ಫಿತ್ನದಿಂದ ರಕ್ಷಣೆಗೆ ಬಾಕಿಯುಳಿದಿರುವ ದಾರಿ ಒಂದೇ ಆಗಿದೆ. ಅದುವೇ ಅವರ (ಶಕೀಲ್ ಬಿನ್ ಹನೀಫ್) ಸಮ್ಮುಖದಲ್ಲಿ ಪ್ರತಿಜ್ಞಾವಿಧಿಯನ್ನು ಸ್ವೀಕರಿಸುವುದು. (ಬೈತ್ ಮಾಡುವುದು). ಇಸ್ಲಾಮಿನ ಬಗ್ಗೆ ಏನೂ ತಿಳುವಳಿಕೆ ಇಲ್ಲದಂತಹ ವ್ಯಕ್ತಿಯು, ಇನ್ನೇನು ನನಗೆ ರಕ್ಷಣೆಯ ಹಾದಿ ಇದೊಂದೇ ಎಂದು ತೀರ್ಮಾನವನ್ನು ಮಾಡುತ್ತಾನೆ. ಇಂತಹ ವ್ಯಕ್ತಿಗಳ ಮನೋಭಾವನೆಗಳನ್ನು ತಿಳಿದುಕೊಂಡು ಮೊದಲನೆಯ ಹಂತದಲ್ಲಿ ಈ ಸಂಘಟನೆಯ ರಾಜ್ಯದ ಅಮೀರ್‍(ಜವಾಬ್ದಾರಸ್ಥ) ರವರ ಬಳಿ ಕರೆದೊಯ್ಯಲಾಗುತ್ತದೆ. ಉದಾಹರಣೆಗೆ ಉತ್ತರ ಪ್ರದೇಶದಲ್ಲಿ ಬನಾರಸ್‍ಗೆ ಕರೆದೊಯ್ಯಲಾಗುತ್ತದೆ. ಅಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಯುವಕನೊಂದಿಗೆ ಭೇಟಿ ಮಾಡಿಸಲಾಗುತ್ತದೆ. ಇವನು ಉತ್ತರ ಪ್ರದೇಶದಲ್ಲಿ ಮೆಹ್ದಿ, ಹಾಗೂ ಮಸೀಹ್(.) ರವರ ಪ್ರಚಾರದ ಅಮೀರ್ ಎಂದು ತಿಳಿಸಲಾಗುತ್ತದೆ. ಇನ್ನೇನು ಕೆಲವೇ ಕೆಲವು ದಿನಗಳ ನಂತರ ಮಹಾರಾಷ್ಟ್ರದ ಔರಂಗಾಬಾದ್‍ಗೆ ಕರೆದುಕೊಂಡು ಹೋಗಿ ಶಕೀಲ್ ಬಿನ್ ಹನೀಫ್‍ನ ಕೈಯಲ್ಲಿ ಬೈತ್(ಪ್ರತಿಜ್ಞಾ ವಿಧಿ) ಮಾಡಿಸಲಾಗುತ್ತದೆ. ಈ ನಡುವೆ ಯಾವುದೇ ಕಾರಣಕ್ಕೂ ಈ ಮಹಾ ಸುಳ್ಳುಗಾರನ ನೈಜ ಹೆಸರು ಸದ್ರಿ ವ್ಯಕ್ತಿಯ ಗಮನಕ್ಕೆ ಬಾರದಂತೆ ತುಂಬಾ ಎಚ್ಚರಿಕೆಯನ್ನು ವಹಿಸಲಾಗುತ್ತದೆ. ಅವನ ಅಸಲಿ ಹೆಸರನ್ನು ಮೋಸಹೋದ ಜನರು ವಿಚಾರಿಸಿದರೂ ಯಾವ ಕಾರಣಕ್ಕೂ ತಿಳಿಸುವುದಿಲ್ಲ. ಇದರ ಉದ್ದೇಶ, ಒಂದು ವೇಳೆ ಯಾರಾದರೂ ಈ ಬಗ್ಗೆ ವಿಚಾರಿಸಿದರೂ, ಈ ಸುಳ್ಳುಗಾರನು ಯಾವ ಮೆಹ್ದಿ ಹಾಗೂ ಯಾವ ಮಸೀಹ್(.) ರವರ ಕಡೆಗೆ ಆಹ್ವಾನವನ್ನು ನೀಡುತ್ತಿದ್ದಾನೆ ಎಂದು ಮನವರಿಕೆಯಾಗಬಾರದು.

ಶಕೀಲ್ ಬಿನ್ ಹನೀಫ್ ಫಿತ್ನ(ಕ್ಷೋಭೆ)ದ ನೈಜತೆಯನ್ನು ತಿಳಿಯಲು ಸಹೀಹ್ ಹದೀಸ್‍ಗಳ ಮೂಲಕ ದಜ್ಜಾಲ್, ಇಮಾಮ್ ಮೆಹ್ದಿ ಹಾಗೂ ಮಸೀಹ್(.) ರವರ ಬಗ್ಗೆ ಈ ಕೆಳಗೆ ಅಗತ್ಯ ಮಾಹಿತಿಗಳನ್ನು ನೀಡಲಾಗುತ್ತಿದೆ. ತನ್ಮೂಲಕ ಶಕೀಲ್ ಬಿನ್ ಹನೀಫ್ ಮಹಾ ಸುಳ್ಳುಗಾರ. ಇವನು ಇಮಾಮ್ ಮೆಹ್ದಿಯೂ ಅಲ್ಲ ಹಾಗೂ ಮಸೀಹ್(.) ಕೂಡಾ ಅಲ್ಲವೇ ಅಲ್ಲ ಎಂಬ ಖಚಿತ ಮಾಹಿತಿ ನಮಗೆ ದೊರೆಯುತ್ತದೆ.

ದಜ್ಜಾಲ್‍ನ ಬಗ್ಗೆ ಶಕೀಲಿಗಳ ವ್ಯಾಜ್ಯ ತೀರಾ ಸುಳ್ಳು. ಇದರಲ್ಲಿ ಯಾವುದೇ ಹುರುಳಿಲ್ಲ. ಈ ವಿಷಯವನ್ನು ಒಬ್ಬ ಮಾಮೂಲಿ ತಿಳುವಳಿಕೆಯುಳ್ಳ ವ್ಯಕ್ತಿಯು ಒಪ್ಪದಿರಲಿಕ್ಕೆ ಸಾಧ್ಯವಿಲ್ಲ. ನಿಜವಾಗಿಯೂ ಇದರ ಬಗ್ಗೆ ವಿಶೇಷವಾಗಿ ಮಾತನಾಡುವ ಅಗತ್ಯವೇ ಇಲ್ಲ. ಆದರೂ ರಸೂಲುಲ್ಲಾಹ್(ಸ್ವ.) ರವರು ದಜ್ಜಾಲ್‍ನ ಬಗ್ಗೆ ಏನೆಲ್ಲಾ ಮಾಹಿತಿಗಳನ್ನು ಹದೀಸ್‍ಗಳಲ್ಲಿ ನೀಡಿದ್ದಾರೋ ಅದರಿಂದ ಒಂದು ಮಾತಂತೂ ಸ್ಪಷ್ಟವಾಗಿ ತಿಳಿಯುತ್ತದೆ. ದಜ್ಜಾಲ್ ಒಬ್ಬ ಮನುಜ ಜಾತಿಗೆ ಸೇರಿದ ವ್ಯಕ್ತಿಯಾಗಿದ್ದಾನೆ. ಎರಡು ರಾಷ್ಟ್ರಗಳ ಕೂಡುವಿಕೆ, ಸೆಟ್‍ಲೈಟ್ ಅಥವಾ ಫೈಟರ್ ಪ್ಲೇನ್ ಅಂತೂ ಯಾವ ಕಾರಣಕ್ಕೂ ಅಲ್ಲವೇ ಅಲ್ಲ. ಪ್ರವಾದಿ (ಸ್ವ.) ರವರು ದಜ್ಜಾಲ್‍ನ ಮುಖಚರ್ಯೆಯ ಬಗ್ಗೆ ಹೇಳಿದ್ದಾರೆ. ಬುಖಾರಿ ಹದೀಸ್ ಗ್ರಂಥದಲ್ಲಿ ಉಲ್ಲೇಖವಿದೆ. (701, ಝಿಕ್ರುಲ್ ಅಂಬಿಯಾ, (باب قول اللہ تعالیٰ واذکر فی الکتاب مریم) ಪ್ರವಾದಿ(ಸ್ವ.) ರಿಗೆ ಕನಸಿನಲ್ಲಿ ದಜ್ಜಾಲ್‍ ನನ್ನು ತೋರಿಸಲಾಯಿತು. ಅವನೊಬ್ಬ ಕೆಂಪು ಬಣ್ಣದ ತೋರದ ವ್ಯಕ್ತಿಯಾಗಿದ್ದ. ಅವನ ತಲೆಯ ಕೂದಲುಗಳು ಒಡಕಾಗಿವೆ. ಬಲಗಣ್ಣು ಇಲ್ಲದೇ ಒಕ್ಕಣ್ಣನಾಗಿದ್ದಾನೆ. ಖುಝಾಆ ಎಂಬ ಗೋತ್ರದಲ್ಲಿ ಇಬ್ನ್ ಕುತುನ್ ಎಂಬ ವ್ಯಕ್ತಿಯಿದ್ದ. ಇವನಿಗೆ ಸರಿ ಹೊಂದುವಂತ ಮೈಕಟ್ಟು ಅವನದ್ದಾಗಿತ್ತು ಎಂದೂ ಹೇಳಿದ್ದಾರೆ. ಇಷ್ಟೊಂದು ಸ್ಪಷ್ಟವಾದ ಮಾಹಿತಿಗಳು ದೊರಕಿದ ನಂತರವೂ ದಜ್ಜಾಲ್ ಒಬ್ಬ ಮನುಷ್ಯನಲ್ಲ ಎಂದು ಹೇಳಲಿಕ್ಕೆ ನಮ್ಮಲ್ಲಿ ಯಾವುದೇ ಆಧಾರಗಳಿಲ್ಲ. ದಜ್ಜಾಲ್ ಅಂದರೆ ಎರಡು ರಾಷ್ಟ್ರಗಳ ಒಗ್ಗೂಡುವಿಕೆ, ಅವನು ಒಕ್ಕಣ್ಣ, ಅದರರ್ಥ ಸೆಟ್‍ಲೈಟ್ ಅಥವಾ ಫೈಟರ್ ಪ್ಲೇನ್ ಇತ್ಯಾದಿ. ಇವೆಲ್ಲಾ ಯಾವುದೇ ತಳಹದಿಗಳಿಲ್ಲದ, ಆಧಾರರಹಿತ ಮಾತುಗಳಾಗಿವೆ.

ಇಮಾಮ್ ಮೆಹ್ದಿಯವರ ಬಗ್ಗೆ ಶಕೀಲ್ ಬಿನ್ ಹನೀಫ್‍ನ ವಿಶ್ಲೇಷಣೆ.

ಹದೀಸ್ ಗ್ರಂಥಗಳಲ್ಲಿ ಅತ್ಯಂತ ಕೂಲಂಕುಷವಾಗಿ ಗಮನಿಸಿದರೆ ಒಂದು ಮಾತಂತೂ ಅತ್ಯಂತ ಸ್ಪಷ್ಟವಾಗಿ ನಮಗೆ ತಿಳಿದು ಬರುತ್ತದೆ. ಹಝ್ರತ್ ಇಮಾಮ್ ಮೆಹ್ದಿ ಹಾಗೂ ಹಝ್ರತ್ ಈಸಾ() ಎರಡು ಬೇರೆ ಬೇರೆ ಮಹಾನ್ ವ್ಯಕ್ತಿಗಳಾಗಿದ್ದಾರೆ. ಆದರೆ ಶಕೀಲ್ ಬಿನ್ ಹನೀಫ್, ಗುಲಾಂ ಅಹ್ಮದ್ ಕಾದಿಯಾನಿ( ಕಾದಿಯಾನಿ ಪಂಥದ ಸ್ಥಾಪಕ) ತರಹ ಏಕಕಾಲದಲ್ಲಿ ತಾನು ಮೆಹ್ದಿ ಹಾಗೂ ಮಸೀಹ್(.) ಆಗಿದ್ದೇನೆ ಎಂಬ ವಾದವನ್ನು ಮಾಡುತ್ತಾನೆ. ಇವನು ಮಹಾ ಸುಳ್ಳುಗಾರ ಎಂಬುವುದನ್ನು ಸಾಬೀತು ಪಡಿಸಲು ಇದೊಂದೇ ಸಾಕು. ಇನ್ನು ಬೇರೆ ಪುರಾವೆಯ ಅಗತ್ಯವಿಲ್ಲ.

ಇಮಾಮ್ ಮೆಹ್ದಿಯವರ ಬಗ್ಗೆ ರಸೂಲುಲ್ಲಾಹ್ (ಸ್ವ.) ರವರು ನಾನಾ ತರಹದ ಗುರುತುಗಳನ್ನು ವಿವರಿಸಿದ್ದಾರೆ. ಅದರಲ್ಲಿ ಕೆಲವೊಂದು ಗುರುತುಗಳನ್ನು ಇಲ್ಲಿ ಉದಾಹರಣೆಗೆ ತಿಳಿಸಲಾಗುತ್ತದೆ. ತನ್ಮೂಲಕ ಶಕೀಲ್ ಬಿನ್ ಹನೀಫ್, ಮೆಹ್ದಿ ಎಂಬ ವಾದದ ಸತ್ಯಾ ಸತ್ಯತೆಗಳನ್ನು ತಿಳಿಯಬಹದು.

1) ರಸೂಲುಲ್ಲಾಹ್(ಸ್ವ.) ರವರು ಹೇಳುತ್ತಾರೆ, ಮೆಹ್ದಿಯವರ ಹೆಸರು ಮುಹಮ್ಮದ್ ಎಂದಾಗಿದೆ. ಅವರ ತಂದೆಯ ಹೆಸರು ಅಬ್ದುಲ್ಲಾ ಎಂದಾಗಿದೆ. (ಅಬೂದಾವೂದ್: 4282, ಕಿತಾಬುಲ್ ಮೆಹ್ದಿ). ಇಲ್ಲಿ ಮೆಹ್ದಿಯ ವಾದ ಮಾಡುವ ವ್ಯಕ್ತಿಯ ಹೆಸರು ಶಕೀಲ್ ಹಾಗೂ ತಂದೆಯ ಹೆಸರು ಹನೀಫ್ ಆಗಿದೆ.

2) ಪ್ರವಾದಿ (ಸ್ವ.) ರವರು ಹೇಳುತ್ತಾರೆ, ಮೆಹ್ದಿಯವರು ನನ್ನ ಕುಟುಂಬದವರಾಗಿದ್ದಾರೆ. ಇವರ ಕುಟುಂಬದ ಪರಂಪರೆಯು ಹಝ್ರತ್ ಫಾತಿಮಾ(.) ರವರೆಗೆ ತಲುಪುತ್ತದೆ. (ಅಬೂದಾವೂದ್, 4284, ಕಿತಾಬುಲ್ ಮೆಹ್ದಿ). ಶಕೀಲ್ ಬಿನ್ ಹನೀಫ್ ಕುಟುಂಬಕ್ಕೆ ಕುಟುಂಬದೊಂದಿಗೆ ಯಾವುದೇ ರೀತಿಯ ಸಂಭಂಧವೇ ಇಲ್ಲ.

3) ಹದೀಸ್ಗಳಲ್ಲಿ ಮೆಹ್ದಿಯವರ ಹಣೆಯು ತುಂಬಾ ಪ್ರಕಾಶಮಾನವಾಗಿದೆ ಅಂದರೆ ತಾವು ತುಂಬಾ ಆಕರ್ಷಕವಾಗಿಯೂ ಸುಂದರವಾಗಿದ್ದರು ಎಂದು ವಿವರಿಸಲಾಗಿದೆ. (ಅಬೂದಾವೂದ್, 4285, ಕಿತಾಬುಲ್ ಮೆಹ್ದಿ).ಇದರ ಪ್ರಕಾರ ಶಕೀಲ್ನಿಗೆ ಯಾವುದೇ ತರಹದ ಹೋಲಿಕೆಯಿಲ್ಲ.

4) ಪ್ರವಾದಿ (ಸ್ವ.) ರವರು ಹೇಳುತ್ತಾರೆ, ಮೆಹ್ದಿಯವರು ಬರುವುದಕ್ಕಿಂತ ಮುಂಚೆ ವಿಶ್ವವು ದೌರ್ಜನ್ಯಗಳಿಂದ ಹಾಗೂ ಅನ್ಯಾಯಗಳಿಂದ ತುಂಬಿ ತುಳುಕುವುದು. ಮೆಹ್ದಿಯವರು ಅನ್ಯಾಯಗಳನ್ನು ಕೊನೆಗೊಳಿಸಿ ನ್ಯಾಯವನ್ನು ಸಂಸ್ಥಾಪಿಸುವರು. (ಅಬೂದಾವೂದ್, 4282, ಕಿತಾಬುಲ್ ಮೆಹ್ದಿ). ಶಕೀಲ್ ಬಿನ್ ಹನೀಫ್, ತಾನು ಮೆಹ್ದಿ ಎಂದು ವಾದ ಮಾಡಿ ಹತ್ತು ವರ್ಷಗಳಿಗೂ ಮಿಗಿಲಾಯಿತು. ನಡುವೆ ವಿಶ್ವದಲ್ಲಿ ಅನ್ಯಾಯಗಳು ನಿರಂತರವಾಗಿ ಹೆಚ್ಚುತ್ತಲೇ ಇದೆ ವಿನಃ ಇದರಲ್ಲಿ ಯಾವುದೇ ತರಹದ ಇಳಿಕೆಯಾಗಲಿಲ್ಲ.

5) ಹದೀಸ್ಗಳಲ್ಲಿ ಮೆಹ್ದಿಯವರು, ಒಬ್ಬಆಡಳಿತಗಾರನಾಗಿರುವರು ಎಂದು ಉಲ್ಲೇಖಿಸಲ್ಪಟ್ಟಿದೆ. (ಅಬೂದಾವೂದ್, 4285, ಕಿತಾಬುಲ್ ಮೆಹ್ದಿ). ಶಕೀಲ್ ಬಿನ್ ಹನೀಫ್, ಅಧಿಕಾರ ಬಿಡಿ ಅಧಿಕಾರದ ಗಂಧಗಾಳಿಯೂ ಇವನ ಹತ್ತಿರ ಸುಳಿಯಲಿಲ್ಲ.

6) ಹದೀಸ್ ಗ್ರಂಥಗಳಲ್ಲಿ ಉಲ್ಲೀಖಿಸಲ್ಪಟ್ಟ ಪ್ರಕಾರ ಮುಹಮ್ಮದ್ ಬಿನ್ ಅಬ್ದುಲ್ಲಾ ಮೆಹ್ದಿಯ ಪಟ್ಟವನ್ನು ಸ್ವೀಕರಿಸಿದ ನಂತರ ಹೆಚ್ಚೆಂದರೆ 9 ವರ್ಷಗಳ ಕಾಲ ಜೀವಂತವಿರುವರು. (ತಿರ್ಮಿಝಿ, 2232, ಬಾಬುಲ್ ಫಿತನ್, ಮಾ ಜಾಅ ಫಿಲ್ ಮೆಹ್ದಿ). 7 ವರ್ಷಗಳ ಕಾಲ ಸ್ವತಃ ಅಧಿಕಾರವನ್ನು ನಡೆಸುವರು. (ಅಬೂದಾವೂದ್, 4285, ಕಿತಾಬುಲ್ ಮೆಹ್ದಿ). ಶಕೀಲ್ ಬಿನ್ ಹನೀಫ್, ತಾನು ಮೆಹ್ದಿ ಎಂದು ವಾದ ಮಾಡಿ ಹತ್ತು ವರ್ಷಗಳಿಗಿಂತಲೂ ಅಧಿಕವಾಯಿತು. ಈವರೆಗೆ ಅವನ ಮರಣವೂ ಆಗಲಿಲ್ಲ. ಆಡಳಿತವೂ ಎಲ್ಲೂ ನಡೆಯಲಿಲ್ಲ.

ಶಕೀಲ್ ಬಿನ್ ಹನೀಫ್ ಹಾಗೂ ಹಝ್ರತ್ ಈಸಾ ().

               ಹಝ್ರತ್ ಈಸಾ() ರವರ ಬಗ್ಗೆ ಕುರ್ಆನ್ ಹಾಗೂ ಹದೀಸ್ಗಳಲ್ಲಿ ಅತ್ಯಂತ ಸ್ಪಷ್ಟವಾಗಿ ಉಲ್ಲೇಖಿಸಲ್ಪಡಲಾಗಿದೆ. ಪುರಾವೆಗಳನ್ನು ಗಮನಿಸಿದಲ್ಲಿ ಶಕೀಲ್ ಹಾಗೂ ಕಾದಿಯಾನಿಗಳಂತಹ ಮಹಾ ಸುಳ್ಳುಗಾರರ ಸಂಚುಗಳು ಬಟಾ ಬಯಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಕೆಳಗೆ ಕೆಲವು ಉದಾಹರಣೆಗಳನ್ನು ನೀಡಲಾಗಿದೆ.

1) ಮೊದಲನೆಯದಾಗಿ ಪ್ರವಾದಿ (ಸ್ವ.) ರವರು ಹಝ್ರತ್ ಈಸಾ () ರವರ ಆಗಮನದ ಬಗ್ಗೆ ಏನೆಲ್ಲಾ ಉಲ್ಲೇಖೀಸುತ್ತಾರೋ, ನಿಸ್ಸಂಶಯವಾಗಿ ಅವೆಲ್ಲಾ ಬನೀ ಇಸ್ರಾಯೀಲ್ನಲ್ಲಿ ಆಗಮಿಸಿದಂತಹ ನಬಿ (ಸಂದೇಶವಾಹಕ) ಯವರಾದಂತಹ ಹಝ್ರತ್ ಈಸಾ ಇಬ್ನ್ ಮರ್ಯಮ್ () ರವರೇ ಆಗಿದ್ದಾರೆ. ಅವರ ತಾಯಿಯವರು ಮರ್ಯಮ್ () ಆಗಿದ್ದರು. ಅವರು ತಂದೆಗೆ ಹೊರತಾಗಿ ಹುಟ್ಟಿದ್ದಾರೆ. ಸಹೀಹ್ ಬುಖಾರಿ, ಸಹೀಹ್ ಮುಸ್ಲಿಮ್ ಹಾಗೂ ಇನ್ನಿತರ ಬೇರೆ ಬೇರೆ ಹದೀಸ್ ಗ್ರಂಥಗಳ ಅನೇಕ ಹದೀಸ್ಗಳಲ್ಲಿ ಬಗ್ಗೆ ಸ್ಪಷ್ಟವಾದ ವಿವರಗಳಿವೆ. ಇವುಗಳಲ್ಲಿ ಕಿಯಾಮತ್ (ಅಂತ್ಯದಿನ) ಸಮೀಪ ಆಕಾಶದಿಂದ ತಮ್ಮ ಆಗಮನದ ಬಗ್ಗೆ ವಿವರಗಳಿವೆ. ಇವರ ಹೆಸರನ್ನು ಈಸಾ ಇಬ್ನ್ ಮರ್ಯಮ್ () ಎಂದೇ ಕರೆಯಲಾಗಿದೆ. ಈ ಪುರಾವೆಗಳ ಪ್ರಕಾರ, ಮೆಹ್ದಿ ಹಾಗೂ ಈಸಾ() ಆಗುವ ವಾದವನ್ನು ಮಾಡುವ ಶಕೀಲ್ ಬಿನ್ ಹನೀಫ್ ಭಾರತ ದೇಶದ ಬಿಹಾರದ ದರ್ಭಂಗ ಜಿಲ್ಲೆಯ ಉಸ್ಮಾನ್ಪುರದವನಾಗಿದ್ದಾನೆ. ಬನೀ ಇಸ್ರಾಯೀಲ್ ನಬಿಯವರಾದ ಹಾಗೂ ತಂದೆಯ ಹೊರತಾಗಿ ಹುಟ್ಟಿದ ಈಸಾ ಬಿನ್ ಮರ್ಯಮ್ () ಇವನಲ್ಲ.

2) ಹಝ್ರತ್ ಈಸಾ () ರವರ ಬಗ್ಗೆ ಹಲವು ಹದೀಸ್ಗಳಲ್ಲಿ ಉಲ್ಲೇಖಿಸಲಾಗಿದೆ. ಇವರು ಆಕಾಶದಿಂದ ಇಳಿಯುವರು. (ಬುಖಾರಿ: 2222, ಕಿತಾಬುಲ್ ಬುಯೂ, ಬಾಬು ಕತ್ಲುಲ್ ಖಿಂಝೀರ್). ಆದರೆ ಶಕೀಲ್ ಬಿನ್ ಹನೀಫ್ ಉಸ್ಮಾನ್ಪುರ ಎಂಬ ಹಳ್ಳಿಯಲ್ಲಿ ಹುಟ್ಟಿದ್ದಾನೆ. ಇವನ ತಂದೆಯ ಹೆಸರು ಹನೀಫ್ ಎಂದಾಗಿದೆ. ಆಕಾಶದಿಂದ ಇವನು ಬಂದವನಲ್ಲ.

3) ಸಹೀಹ್ ಬುಖಾರಿ ಹಾಗೂ ಸಹೀಹ್ ಮುಸ್ಲಿಮ್ ಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ, ಯಾರ ಕೈಗಳಲ್ಲಿ ನನ್ನ ಜೀವವಿದೆಯೋ ಅವನಾಣೆ, ನಿಮ್ಮ ನಡುವೆ ಇಬ್ನ್ ಮರ್ಯಮ್() ನ್ಯಾಯವನ್ನು ಪಾಲಿಸುವ ಆಡಳಿತಗಾರನಾಗಿ ಖಂಡಿತವಾಗಿಯೂ ಆಗಮಿಸುವರು. ಶಿಲುಬೆಯನ್ನು ಕೆಡವುವರು. ( ಅಂದರೆ ಇವರ ಆಗಮನದ ನಂತರ ಎಲ್ಲಾ ಕ್ರೈಸ್ತರು ಇಸ್ಲಾಮ್ ಧರ್ಮವನ್ನು ಸ್ವೀಕರಿಸುವರು. ಶಿಲುಬೆಯ ಆರಾಧನೆ ಕೊನೆಗೊಳ್ಳುವುದು). ಹಂದಿಯ ವಂಶವನ್ನೇ ಮುಗಿಸಿ ಬಿಡುವರು. ಶ್ರೀಮಂತಿಕೆ ಹಾಗೂ ಹಣದ ಹೊಳೆಯೇ ಹರಿಯಲಿರುವುದು. ಸದಕಾಗಳನ್ನು ಸ್ವೀಕರಿಸುವವರೇ ಇಲ್ಲವಾಗಬಹುದು. (ಬುಖಾರಿ, 2222, ಕಿತಾಬುಲ್ ಬುಯೂ, ಬಾಬು ಕತ್ಲುಲ್ ಖಿಂಝೀರ್, ಮುಸ್ಲಿಮ್ 155 / 2476, ಕಿತಾಬುಲ್ ಈಮಾನ್, ಬಾಬು ನುಝೂಲು ಈಸಾ ಬಿನ್ ಮರ್ಯಮ್().

               ಇನ್ನು ಮೇಲಿನ ಹದೀಸ್ಗಳ ಮಾರ್ಗದರ್ಶನಗಳ ಮೂಲಕ ಶಕೀಲ್ ಬಿನ್ ಹನೀಫ್ ಬಗ್ಗೆ ವಿಶ್ಲೇಷಿಸೋಣ. ಇದುವರೆಗೆ ಅವನು ಅಧಿಕಾರವನ್ನು ಹೊಂದಿಲ್ಲ. ಇದರ ಬಗ್ಗೆ ಇರಾದೆಯೂ ಅವನಿಗಿಲ್ಲ. ಇದೀಗ ಮಹಾರಾಷ್ಟ್ರದ ಔರಂಗಾಬಾದ್ ಒಂದು ಪಟ್ಟಣದಲ್ಲಿ ವಾಸಿಸುತ್ತಿದ್ದಾನೆ. ಅಲ್ಲಿಂದ ಹೊರ ಬರುವ ಲಕ್ಷಣಗಳೇ ಕಾಣುವುದಿಲ್ಲ. ಇದುವರೇಗೆ ಇವನು ಯಾವುದೇ ಶಿಲುಬೆಯನ್ನು ಕೆಡವಲಿಲ್ಲ. ಯಾವೊಬ್ಬ ಕ್ರೈಸ್ತನೂ ಇವನ ಕೈಯಲ್ಲಿ ಇಸ್ಲಾಮನ್ನು ಸ್ವೀಕರಿಸಲಿಲ್ಲ. ಹಂದಿಗಳನ್ನು ಕೊಲ್ಲಲಿಲ್ಲ. ಇವನ ವಾದದ ನಂತರ ಯಾವ ಶ್ರೀಮಂತಿಕೆಯೂ, ಆಸ್ತಿ ಪಾಸ್ತಿಗಳೂ ವಿಶ್ವದಲ್ಲಿ ಹರಿಯುತ್ತಿಲ್ಲ. ಸದಕಾಗಳನ್ನು ಸ್ವೀಕರಿಸಲು ತಯಾರಿಲ್ಲದಂತಹ ಬಡತನದ ಕೊನೆಯೂ ಆಗಲಿಲ್ಲ.

4) ಕುರ್ಆನ್ ಸೂರ ನಿಸಾದ 159 ನೇ ಆಯತ್ನಲ್ಲಿ ಹೇಳಲಾಗಿದೆ. ಹಝ್ರತ್ ಈಸಾ() ರವರ ವಫಾತ್ (ಮರಣ) ಗಿಂತ ಮುಂಚಿತವಾಗಿ ಎಲ್ಲಾ ಯಹೂದಿಯರೂ, ಕ್ರೈಸ್ತರೂ ಮುಸ್ಲಿಮರಾಗುವರು. ”وان من اہل الکتاب الا لیومنن بہ قبل موتہ“. ಶಕೀಲ್‍ನ ಕೈಯಲ್ಲಿ ಈತನಕ ಒಬ್ಬನೇ ಒಬ್ಬ ಇಸ್ಲಾಮನ್ನು ಸ್ವೀಕರಿಸಿದ ಉದಾಹರಣೆ ಇಲ್ಲ.

               ಹಝ್ರತ್ ಮೆಹ್ದಿ ಹಾಗೂ ಹಝ್ರತ್ ಈಸಾ() ರವರ ಬಗ್ಗೆ ಇನ್ನಷ್ಟು ವಿವರಗಳು ಹದೀಸ್ ಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿವೆ. ಆದರೆ ಇವೇ ಕೆಲವು ಮೇಲಿನ ಪುರಾವೆಗಳು ಇವನ ಮಹಾ ಸುಳ್ಳನ್ನು ಹಾಗೂ ಸಂಚನ್ನು ಬಯಲುಗೊಳಿಸಲು ಸಾಕು.

ಶಕೀಲ್ ಬಿನ್ ಹನೀಫ್ ಫಿತ್ನ, ಇದನ್ನು ಎದುರಿಸುವುದು ಹೇಗೆ ?

               ಈ ಫಿತ್ನವನ್ನು ಅತ್ಯಂತ ರಹಸ್ಯವಾಗಿ ವೇಗವಾಗಿ ಹರಡಿಸಲಾಗುತ್ತಿದೆ. ಸಾಮಾನ್ಯವಾಗಿ ಈ ಫಿತ್ನದ ಹರಡುವಿಕೆಯ ಬಗ್ಗೆ ದೀನ್‍ನ ಜ್ಞಾನವುಳ್ಳ ಚಿಂತಕರಿಗೆ ಮಾಹಿತಿ ದೊರೆಯುವಷ್ಟರಲ್ಲಿ ಸಮಯವು ಕಳೆದು ಕೈಮೀರಿ ಹೋಗಿರುತ್ತದೆ. ಹತ್ತು ಹಲವು ಯುವಕರು ಇದಕ್ಕೆ ಬಲಿಯಾಗಿರುತ್ತಾರೆ. ಲಕ್ನೋದಂತಹ ಮುಸ್ಲಿಂ ಬಾಹುಳ್ಯವಿರುವ ಪ್ರದೇಶದಲ್ಲಿ ಈ ಫಿತ್ನವು ಹರಡಿ ಒಂದು ವರ್ಷ ಕಳೆದ ನಂತರ ಮಾಹಿತಿ ದೊರೆಯಿತು. ದೆಹಲಿ,ಬಿಹಾರ, ಮಹಾರಾಷ್ಟ್ರ, ಗುಜರಾತ್ ಹಾಗೂ ಉತ್ತರ ಪ್ರದೇಶ ಸೇರಿ ದೇಶದ ಹಲವು ರಾಜ್ಯಗಳಲ್ಲಿ ಈ ಫಿತ್ನವು ದೊಡ್ಡ ಮಟ್ಟದಲ್ಲಿ ಹರಡಿ ಆಗಿತ್ತು. ಇದರ ಬಗ್ಗೆ ಮಾಹಿತಿ ದೊರೆಯುವಷ್ಟರಲ್ಲಿ ಸಮಯ ಮೀರಿ ಹೋಗಿತ್ತು. ಆದ್ದರಿಂದ ಈ ಫಿತ್ನದ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಯಾವ ಕಾರಣಕ್ಕೂ ತಡ ಮಾಡಬಾರದು. ಅಲ್ಲಲ್ಲಿ ಕೆಲವೇ ಕೆಲವು ಇದರ ಪ್ರಚಾರಕರಿದ್ದಾರೆ. ಅಷ್ಟೇನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂದು ಆಲೋಚಿಸಬಾರದು. ಕೆಲವೊಮ್ಮೆ ಈ ಫಿತ್ನವು ತನ್ನ ಜಾಲವನ್ನು ಆ ಪ್ರದೇಶದಲ್ಲಿ ಹರಡಿರಬಹುದು. ನಮಗೆ ಅದರ ಬಗ್ಗೆ ಮಾಹಿತಿ ಇರದಿರಲಿಕ್ಕೂ ಸಾಕು. ಕೆಲವು ಮಸೀದಿಗಳಲ್ಲಿ ಜುಮಾ ಖುತುಬಾಗಳಲ್ಲಿ ಇಮಾಮರು ಈ ಬಗ್ಗೆ ಸಂದೇಶವನ್ನು ನೀಡುವಾಗ, ಕೆಲವು ಯುವಕರು ಬಂದು, ನಮಗೂ ಅಲ್ಲಲ್ಲಿ ಇಂತಹ ಪ್ರಚಾರಕರು ಸಿಕ್ಕಿದ್ದಾರೆ. ಈ ಬಗ್ಗೆ ಆಹ್ವಾನವನ್ನೂ ನೀಡಿದ್ದಾರೆ ಎಂದು ಹೇಳಿದ್ದುಂಟು. ಒಂದು ವೇಳೆ ನಮ್ಮ ಪ್ರದೇಶದಲ್ಲಿ ಈ ಫಿತ್ನವು ಇಲ್ಲದಿದ್ದರೂ ಮುಂಚಿತವಾಗಿಯೇ ನಮಗೆ ಮಸೀದಿಗಳಲ್ಲಿ, ದೀನೀ ಮಜ್ಲಿಸ್‍ಗಳಲ್ಲಿ ಉಲಮಾಗಳು ಇದರ ಬಗ್ಗೆ ಮಾಹಿತಿಯನ್ನು ನೀಡುತ್ತಿರಬೇಕು. ಇದರಿಂದಾಗಿ ಒಂದು ವೇಳೆ ಆ ಸಂಚು ನಮ್ಮ ಪ್ರದೇಶದಲ್ಲಿ ಬಂದರೂ ನಾವು ಹಾಗೂ ನಮ್ಮ ಯುವಕರು ದಾರಿ ತಪ್ಪಲಿಕ್ಕಿಲ್ಲ. ಬುಡದಲ್ಲಿಯೇ ಅದನ್ನು ಹೊಡೆದೋಡಿಸುವ ಪ್ರಯತ್ನವನ್ನು ಖಂಡಿತ ಮಾಡಬಹುದು.

               ಜುಮಾ ಖುತುಬಾಗಳಲ್ಲಿ, ಇನ್ನಿತರ ದೀನೀ ಚಿಂತನೆಯ ಮಜ್ಲಿಸ್‍ಗಳಲ್ಲಿ ಈ ಫಿತ್ನದ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡುತ್ತಿರಬೇಕು. ಎಚ್ಚರಿಕೆಯ ಸಂದೇಶವನ್ನು ರವಾನಿಸುತ್ತಿರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮವರಿಗೆ ಅರಿವನ್ನು ನೀಡುತ್ತಿರಬೇಕು. ಈಮಾನನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿರುವ ಸಂಚುಕೋರರಿಗೆ ತಕ್ಕ ರೀತಿಯಲ್ಲಿ ಎದುರಿಸಲು ಸರ್ವ ಸನ್ನಧ್ದರಾಗಿರಬೇಕು. ಸದ್ಯಕ್ಕೆ ಇದನ್ನು ಎದುರಿಸಲು ಇರುವ ಏಕೈಕ ದಾರಿ ಇದುವೇ ಆಗಿದೆ. ದೀನಿನ ಹಿತಚಿಂತಕರು ಅಲ್ಲಲ್ಲಿ ಈ ಬಗ್ಗೆ ಗಾಢವಾಗಿ ಚಿಂತಿಸಿ ಇದಕ್ಕೆ ಪರಿಹಾರವನ್ನು ಕಂಡುಹಿಡಿಯಲು ಪ್ರಯತ್ನಿಸಿದಲ್ಲಿ ಖಂಡಿತಾವಾಗಿಯೂ ಇದನ್ನು ಮೂಲದಿಂದಲೇ ಉಚ್ಛಾಟಿಸಬಹುದು ಇನ್ ಶಾ ಅಲ್ಲಾಹ್.

               ಸಾಮಾನ್ಯವಾಗಿ ನಾವು ಸಮಸ್ಯೆಗಳು ಕೈಮೀರುವಂತಹ ಸಮಯದಲ್ಲಿ ಪರಿಹಾರವನ್ನು ಕಂಡು ಹುಡುಕಲು ಪ್ರಾರಂಭಿಸುವುದು ಮಾಮೂಲಾಗಿ ಹೋಗಿದೆ. ಅದಾಗಲೇ ಆ ಸಮಸ್ಯೆಗಳು ಹೆಮ್ಮರವಾಗಿ ಬೆಳೆದಿರುತ್ತದೆ. ಅದನ್ನು ಮುಗಿಸುವುದು ತುಂಬಾ ತಲೆನೋವಾಗಿ ಪರಿಣಮಿಸುತ್ತದೆ. ಕಾದಿಯಾನಿಗಳ ವಿಷಯದಲ್ಲಿ ನೋಡುವುದಾದರೆ, ಇದುವೇ ಸಮಸ್ಯೆ ಅಲ್ಲಿ ಎದ್ದು ಕಾಣುತ್ತಿತ್ತು. ನಮ್ಮ ಆಲಸ್ಯತನದಿಂದಾಗಿ ಇಂದು ತನ್ನ ಬಹುದೊಡ್ಡ ಜಾಲವನ್ನು ವಿಸ್ತರಿಸಿ ನಿರಂತರವಾಗಿ ನಮ್ಮ ಸಮುದಾಯದ ಸತ್ಯ ವಿಶ್ವಾಸವನ್ನು ದೋಚುವಲ್ಲಿ  ದೊಡ್ಡ ಪಾತ್ರವನ್ನು ವಹಿಸುತ್ತಿದೆ. ಆದ್ದರಿಂದ ಈ ಹೊಸ ರೂಪ(ಫಿತ್ನ ಶಕೀಲ್ ಬಿನ್ ಹನೀಫ್)ದ ಕಾದಿಯಾನಿಗಳ ಫಿತ್ನಕ್ಕೆ ಯಾವ ಕಾರಣಕ್ಕೂ ಸಮುದಾಯವು ಬಲಿಯಾಗದ ಹಾಗೆ ಎಚ್ಚೆತ್ತುಕೊಳ್ಳಬೇಕು. ಒಂದು ವೇಳೆ ಈ ಸಂಚು ದೊಡ್ಡ ಮಟ್ಟಕ್ಕೆ ತಲುಪಿದಲ್ಲಿ ಇದರ ಮೂಲೋತ್ಪಾಟನೆ ಕಾದಿಯಾನಿಗಳ ಹಾಗೆ, ಖಂಡಿತ ಬಹುದೊಡ್ಡ ಸಮಸ್ಯೆಯಾಗಿ ತಲೆದೋರಬಹುದು.

               ನಮ್ಮ ದೇಶ ಪ್ರಜಾಪ್ರಭುತ್ವ ದೇಶವಾಗಿದೆ.ನಮ್ಮ ಸಂವಿಧಾನವು ಸಂಪೂರ್ಣವಾಗಿ ತಮ್ಮ ತಮ್ಮ ಧರ್ಮಗಳನ್ನು ಪಾಲಿಸುವ ಹಾಗೂ ಪ್ರಚಾರವನ್ನು ಮಾಡುವ  ಸ್ವಾತಂತ್ರ್ಯವನ್ನು ಪ್ರತಿಯೊಬ್ಬರಿಗೂ ನೀಡಿದೆ. ಆದರೆ ಕೆಲವೇ ಕೆಲವು ಮಂದಿ, ಶಾಂತಿಯಪ್ರೀಯರ ಶಾಂತಿಯನ್ನು ಹಾಳು ಮಾಡಲು ತುದಿಗಾಲಲ್ಲಿರುತ್ತಾರೆ. ಧರ್ಮದ ಹೆಸರಿನಲ್ಲಿ ಧರ್ಮವನ್ನು ವಿರೂಪಗೊಳಿಸುವ ಷಡ್ಯಂತರವನ್ನು ಮಾಡಲು ಪ್ರಯತ್ನಿಸುತ್ತಾರೆ. ನಿಜವಾಗಿ ಇವರು ದೇಶಕ್ಕೂ, ಸಮುದಾಯಕ್ಕೂ ಹಾನಿಯನ್ನು ಮಾಡಲು ಬಯಸುವವರಾಗಿದ್ದಾರೆ. ಭಾರತದಲ್ಲಿ ಮುಸ್ಲಿಮರು ಯಾರು ಎಂಬುವುದಕ್ಕೆ ಸ್ವಷ್ಟ ಪುರಾವೆಗಳ ಅಗತ್ಯವೇ ಇಲ್ಲ. ಈ ಕಲ್ಪನೆಯನ್ನು ಹಾಳು ಮಾಡಲು ಕೆಲವು ಬಾಹ್ಯ ಶಕ್ತಿಗಳು ಇದಕ್ಕೆ ನಿರಂತರ ಬೆಂಬಲವನ್ನು ನೀಡುತ್ತಿವೆ. ಈ ನಡುವೆ ಇಂತಹ ಕೆಲವು ಶಕ್ತಿಗಳು ಹೊರ ಬರುವುದರಿಂದ ಮುಸ್ಲಿಮರಲ್ಲಿ ಪಂಗಡಗಳಾಗಿ ನಾನಾ ತರಹದ ಸಮಸ್ಯೆಗಳು ಎದುರಾಗುವುದು ಖಂಡಿತ. ಇದರಿಂದಾಗಿ ಕೆಲವೊಮ್ಮೆ ಆಂತರಿಕ ಸಮಸ್ಯೆಗಳು ಉಂಟಾಗಿ ಸಮುದಾಯದ ಸ್ವಾಸ್ಥ್ಯವು ಕೆಡುವುದುಂಟು. ಮಿತ್ಯವನ್ನೇ ಸತ್ಯವೆನ್ನುವ ಸನ್ನಿವೇಶವು ಎದುರಾಗುವುದುಂಟು. ತಲೆತಲಾಂತರಗಳಿಂದ ಬಂದ ವಿಶ್ವಾಸಕ್ಕೆ ಕೊನೆಗಾಣಿಸಲು ಇನ್ನಿಲ್ಲದ ಕಸರತ್ತು ನಡೆಯುವುದುಂಟು. ಶಕೀಲ್ ಬಿನ್ ಹನೀಫ್‍ನ ಫಿತ್ನವು ಇದಕ್ಕೊಂದು ಉದಾಹರಣೆ. ಆದ್ದರಿಂದ ಯಾವ ಕಾರಣಕ್ಕೂ ನಾವು ಇದಕ್ಕೆ ಬಲಿಯಾಗದೆ ಇದನ್ನು ಮುಗಿಸಿಬಿಡಲು ಪ್ರಯತ್ನಿಸಬೇಕು. ಇದರಿಂದ ಸಮುದಾಯಕ್ಕೂ ಒಳಿತು ಹಾಗೂ ದೇಶಕ್ಕೂ ಒಳಿತು.

ಲೇಖನ : ಮೌಲಾನಾ ಅಬ್ದುಲ್ ಹಫೀಝ್ , ಅಲ್ ಕಾಸಿಮೀ, ಕಾರ್ಕಳ.

Leave a Comment

×